Total Pageviews

Popular Posts

Wednesday, January 29, 2014

Boarding pass

ಉರಿಬಿಸಿಲಿನಲ್ಲಿ ಕೆಲಸದನಿಮಿತ್ತ ದೆಹಲಿಯ ಉದ್ದಗಲಕ್ಕೂ ಅಲೆದು ವಾತಾನುಕೂಲಿತ ಟರ್ಮಿನಲ್ ಬಿಲ್ಡಿಂಗ್ ನೊಳಗೆ ಹೊಕ್ಕಾಗ ದೇಹಕ್ಕೆ ಹಾಯೆನಿಸಿತು.ಕಾಲೆಳೆದುಕೊಂಡು  ಬಂದು ಬೆಂಗಳೂರಿಗೆ  ಹೋಗುವ ವಿಮಾನಕ್ಕೆಂದು  ನಿಗದಿ ಯಾದ  ಗೇಟಿನ ಮುಂದೆ ಬಂದು ಕುಳಿತೆ.  ಹಾಗೆಯೇ ಕಣ್ಣು ಮುಚ್ಚಿ ಸ್ವಲ್ಪ ಹೊತ್ತಾದ ಮೇಲೆ ಕಣ್ಣು ತೆರೆದಾಗ  ಅಲ್ಲೊಂದು ಸಣ್ಣ ಪ್ರಪಂಚವೇ  ಕಾಣತೊಡಗಿತ್ತು.
ತರಾತುತಿಯಿಂದ ಓಡುತ್ತಿದ್ದ ಕೆಲವರಾದರೆ, ಸಮಯದ ಮೇಲೆ ಸವಾರಿ ಮಾಡುವವರಂತೆ ಕಾಲೆಳೆಯುತ್ತಾ ಗಜಗಮನರಾಗಿ ಬರುತ್ತಿದ್ದ ಕೆಲವರು, ಓಡುತ್ತಿದ್ದ ಮಗುವನ್ನು ಹಿಡಿಯಲಾರದೆ ನಿಸ್ಸಹಾಯಕತೆಯಿಂದ, ತನ್ನ ಹೆಗಲಮೇಲಿಂದ ಜಾರುತ್ತಿದ್ದ ಚೀಲವನ್ನು ಸರಿಪಡಿಸಿಕೊಂಡು ಮಗುವಿನ ಹಿಂದೆ ಓಡುವ ವ್ಯರ್ಥ ಪ್ರಯತ್ನ ದಲ್ಲಿ ತೊಡಗಿದ್ದ ತಾಯಿ, ತಮ್ಮ ಸುತ್ತಮುತ್ತಲಿನ ಯಾವ ಅರಿವೂ ಇಲ್ಲದೆ ಹೆಗಲಿಗೆ ಹೆಗಲು ತಾಗಿಸಿಕೊಂಡು ಪಿಸುಮಾತನಾಡುತ್ತ ನಡೆದು ಬರುತ್ತಿದ್ದ ಯುವಕ- ಯುವತಿಯರ ಜೋಡಿ,ತಾಳೆಯಾಗದಿದ್ದ ಖರ್ಚಿನ ಲೆಕ್ಕದಲ್ಲಿ ಮುಳುಗಿದ್ದ ವ್ಯಾಪಾರಿ, ಸೆಲ್ ಫೋನಿನಲ್ಲಿ ತನ್ನ ಸಹಾಯಕನಿಗೆ ಜೋರಾಗಿ ಬೈಯ್ಯುತ್ತಿದ್ದ ಬಾಸು, ಮೊದಲ ಬಾರಿ ವಿಮಾನಯಾನ ಮಾಡುವ ಸಂಭ್ರಮದಲ್ಲಿದ್ದ ಹಳ್ಳಿಯ ಮಹಿಳೆಗೆ ವಿಮಾನಯಾನದ ವಿವಿಧ ಮಜಲು ಗಳನ್ನು ವಿವರುಸುತ್ತಿದ್ದ ಮಗ, ಧ್ವನಿ ವರ್ಧಕ ದಲ್ಲಿ ತುಂಡು ತುಂಡಾಗಿ ಕೇಳಿಬರುತ್ತಿದ್ದ ಪ್ರಕಟಣೆಗಳು, ಒಂದೊಂದೂ  ಎಷ್ಟೊಂದು ಸೋಜಿಗ ...!?  ಎಷ್ಟೊಂದು ವೈವಿಧ್ಯಮಯ....? ನೋಡನೋಡುತ್ತ ಮೈ ಮರೆತಿದ್ದೆ . ಕೈಯಲ್ಲಿ ಹಿಡಿದುಕೊಂಡಿದ್ದ  ಪುಸ್ತಕ ಜಾರಿ ಕೆಳ ಬಿದ್ದಿದ್ದು ಗೊತ್ತೇ  ಆಗಿರಲಿಲ್ಲ. ಅದರ ಹಾಳೆಗಳ ಮಧ್ಯದಲ್ಲಿ  ಬೋರ್ಡಿಂಗ್ ಪಾಸು ಇಟ್ಟ ನೆನಪು - ಆದರೆ ಅದೆಲ್ಲಿ...? Flight announce ಆಗಿಯೇ ಬಿಟ್ಟಿತಲ್ಲಾ !! ಸುತ್ತಲೂ ನೋಡಿದೆ. ನನ್ನ ಕೈ ಚೀಲದಲ್ಲೂ  ಇಲ್ಲ.

ಎಲ್ಲೋ ನೋಡುತ್ತಿದ್ದ ತಾಯಿಯ ತೊಡೆಯಮೇಲೆ ಮಲಗಿದ್ದ ಹಸು ಗೂಸೊಂದು ಎರಡೂ ಕೈ ಗಳಿಂದ ಒಂದು ಬೋರ್ಡಿಂಗ್ ಪಾಸನ್ನು ತನ್ನ ಬಾಯಿಯಲ್ಲಿ ತುರುಕುತ್ತಿತ್ತು ! ಅದರ ಶಾಯಿಯ ಕಹಿ ನಾಲಗೆಗೆ ತಾಗಿದಾಗ ಮುಖ ಸಿಂಡರಿಸಿಕೊಂಡರೂ ಇನ್ನೊಮ್ಮೆ ಅದೇ  ಪ್ರಯತ್ನ .  ಹಾಂ , ಹೌದು , ಅದು ನನ್ನದೇ ಬೋರ್ಡಿಂಗ್ ಪಾಸ್! ಆದರೆ ಕೇಳುವುದು ಹೇಗೆ? ನಾನು ಆ ಮಗುವಿಗಿಂತಲೂ ಚಿಕ್ಕವನಾಗಿ ಬಿಟ್ಟೆನಲ್ಲ !? ಹೌದು, ಅದನ್ನು ತೋರಗೊಡಬಾರದು. ಆದರೆ ಬೋರ್ಡಿಂಗ್ ಪಾಸ್ ಬೇಕು. ಎಲ್ಲರೂ ಬೋರ್ಡ್  ಆದರು. ಇನ್ನು ನನ್ನದೇ ಸರದಿ. ಅಷ್ಟರಲ್ಲಿ ಅ ಮಗುವಿನ ತಾಯಿ ಯ flight announce ಆಯಿತು.ಆಕೆ, ಮಗುವನ್ನು ಸಾವರಿಸಿಕೊಂಡು , ಅದರ ಬಾಯಲ್ಲಿದ್ದ ಬೋರ್ಡಿಂಗ್ ಪಾಸನ್ನು  ಅಲ್ಲೇ ಕಿತ್ತೊಗೆದು, ಚೀಲ ವನ್ನೆತ್ತಿಕೊಂಡು ಹೊರಟೇ ಬಿಟ್ಟರು. ನಾನು  ಓಡಿ  ಹೋಗಿ ಬೋರ್ಡಿಂಗ್ ಪಾಸನ್ನು ಗಬಕ್ಕನೆ ಹಿಡಿದು ಗೇಟಿ ನೊಳಗೆ  ಪ್ರವೇಶಿಸಿದೆ.